ಹುಚ್ಚು ಕೋಡಿ ಮನಸು
ಹೆಚ್. ಎಸ್. ವೆಂಕಟೇಶ್ ಮೂರ್ತಿ
ಹುಚ್ಚು ಕೋಡಿ ಮನಸು
ಅದು ಹದಿನಾರರ ವಯಸು || ಪ ||
ಮಾತು ಮಾತಿಗೇಕೋ ನಗು
ಮರುಘಳಿಗೇ ಮೌನ,
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ ||
ಸೆರಗು ತೀಡಿದಷ್ಟು ಸುಕ್ಕು
ಹಠಮಾಡುವ ಕೂದಲು
ನಿರಿ ಏಕೋಸರಿಯಾಗದು
ಮತ್ತೆ ಒಳ ಹೋದಳು ||
ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೆ,
ನಗುತ ಅವಳ ಛೇಡಿಸುತಿದೆ
ಗಲ್ಲದ ಕರಿಮಚ್ಚೆ ||
ಬರೀ ಹಸಿರು ಬರಿ ಹೂವು
ಎದೆಯೊಳೆಷ್ಟೊ ಹೆಸರು
ಯಾವ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||